ಅಡಿಸನ್, ಜೋಸೆಫ್
	
(1672-1719). ಇಂಗ್ಲಿಷ್ ಪ್ರಬಂಧಕಾರ, ಕವಿ, ವಿಮರ್ಶಕ, ನಾಟಕಕಾರ ಹಾಗೂ ರಾಜಕಾರಣಿ, ಆಕ್ಸ್‍ಫರ್ಡ್‍ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪ್ರಾಚೀನ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದ. 1706ರಲ್ಲಿ ಸರ್ಕಾರದಲ್ಲಿ ಉಪಕಾರ್ಯದರ್ಶಿಯಾದ. 1708ರಿಂದ ಜೀವಮಾನ ಪರ್ಯಂತ ಪಾರ್ಲಿಮೆಂಟಿನ ಸದಸ್ಯನಾಗಿದ್ದ. ಇವನನ್ನು ಅಲೆಕ್ಸಾಂಡರ್ ಪೋಪ್ ಅ್ಯಂಟಿಕಸ್ ಎಂಬ ಹೆಸರಿನ ಪಾತ್ರದಲ್ಲಿ ವಿಡಂಬನೆ ಮಾಡಿದ್ದಾನೆ. 
	
1710ರಲ್ಲಿ ಇವರ ಸ್ನೇಹಿತ ರಿಚರ್ಡ್ ಸ್ಟೀಲ್ ಪ್ರಾರಂಭಿಸಿದ ದಿ ಟ್ಯಾಟ್ಲರ್ ಪತ್ರಿಕೆ ಅಡಿಸನ್ನನ ಕಲ್ಪನಾಶಕ್ತಿಗೆ ಉತ್ತಮವಾದ ಅವಕಾಶವನ್ನು ಒದಗಿಸಿತು. ಇದರಲ್ಲೂ ದಿ ಸ್ಪೆಕ್ಟೇಟರ್ ಪತ್ರಿಕೆಯಲ್ಲೂ ಅಡಿಸನ್ ಸ್ಟೀಲ್‍ನೊಂದಿಗೆ ಕೆಲಸಮಾಡಿದ. ಸ್ಪೆಕ್ಟೇಟರ್ ಕ್ಲಬ್ಬು ಸ್ಟೀಲ್‍ನ ಸೃಷ್ಟಿ ; ಕ್ಲಬ್ಬಿನ ಒಂದು ಪಾತ್ರ-ಸರ್ ರೋಜರ್ ಡಿ ಕವರ್‍ಲಿಯನ್ನು ಪೂರ್ಣವಾಗಿ, ಮನೋಹರವಾಗಿ ಬೆಳೆಸಿದವನು ಅಡಿಸನ್. ಇವನ ಪ್ರಬಂಧಗಳ ಉದ್ದೇಶ ತತ್ತ್ವಶಾಸ್ತ್ರವನ್ನು ವಿದ್ಯಾಲಯ ಪುಸ್ತಕ ಭಂಡಾರಗಳಿಂದ ಮನೆ ಮನೆಗೆ, ಸಾಮಾನ್ಯ ಮನುಷ್ಯನಿಗೆ ತಂದು ಕೊಡುವುದು. ಅಡಿಸನ್ನನ ಪ್ರಬಂಧಗಳಲ್ಲಿ ಸುವರ್ಣಮಾಧ್ಯಮನೀತಿ ಬೆಳಗುತ್ತದೆ. ಸುತ್ತಮುತ್ತಲಿನ ಜೀವನವನ್ನು ಸಾಮಾನ್ಯ ವಿವೇಚನೆಯ ದೃಷ್ಟಿಯಿಂದ ಇವನು ಕಾಣುತ್ತಾನೆ. ಸ್ಟೀಲ್‍ನಲ್ಲಿ ಕಾಣುವ ಸ್ನೇಹಪರತೆ, ಸಹಾನುಭೂತಿ ಇವನಲ್ಲಿಲ್ಲ. ಉದಾತ್ತ ಆದರ್ಶಗಳೇನೂ ಇಲ್ಲದಿದ್ದರೂ ಅಪಹಾಸ್ಯಕ್ಕೀಡಾಗಬಾರದೆಂಬ ಮರ್ಯಾದೆಯ ಅಭಿಮಾನ ಇವನಿಗೆ ಕೈದೀವಿಗೆಯಾಗಿತ್ತು. ಇವನ ಪ್ರಬಂಧಗಳು ರಂಜನೆ ಮತ್ತು ಉಪದೇಶಗಳ ಮಧುರ ಸಂಗಮವಾಗಿದೆ. ಲಾಲಿತ್ಯ ಮತ್ತು ನಿರ್ದುಷ್ಟತೆಗಳು ಇವನ ಶೈಲಿಯ ಮುಖ್ಯ ಲಕ್ಷಣಗಳು. ಲಲಿತಪ್ರಬಂಧದ ರೂಪ, ಧ್ವನಿ ಮತ್ತು ಶೈಲಿಗಳ ಮೇಲೆ ಇವರ ಪ್ರಭಾವ ಅಪಾರವಾದುದು. ಗೋಲ್ಡ್‍ಸ್ಮಿತ್ ಅಥವಾ ಸ್ಟೀಲ್‍ನಂತೆ ಅಡಿಸನ್ ತನ್ನ ಹೃದಯವನ್ನು ತೆರೆದು ತೋರಿಸುವುದಿಲ್ಲ. ಆದರೆ ಗಾಂಭೀರ್ಯ, ಸಂಯಮ ಮತ್ತು ಸದಾ ಎಚ್ಚೆತ್ತ ಅಭಿರುಚಿ ಇವರ ಬರಹವನ್ನು ಉತ್ತಮಗೊಳಿಸಿವೆ. ಶಬ್ದಸಂಪತ್ತು ಮಿತವಾಗಿದ್ದರೂ ಪರಿಣಾಮಕಾರಿಯಾಗಿ ಕಟಕಿಯನ್ನು ಇವನು ಬಳಸಬಲ್ಲ. ತನ್ನ ಪ್ರಬಂಧಗಳ ಮೂಲಕ ಸಮಾಜದ ಮೇಲೆ ವಿಶೇಷ ಪ್ರಭಾವವನ್ನು ಈತ ಬೀರಿದ. ಸಭಾನಡತೆ, ಸಾರ್ವಜನಿಕ ಸ್ಥಳಗಳಲ್ಲಿ ಮಾತುಕತೆ ; ಉಡುಗೆತೊಡುಗೆಗಳು, ಅಭಿರುಚಿ, ರಾಜಕೀಯ, ಸಾಹಿತ್ಯಕೃತಿಗಳ ಮೌಲ್ಯದ ನಿರ್ಧಾರ, ಅಷ್ಟೇಕೆ, ಪ್ರಿಯ ಪ್ರೇಯಸಿಯನ್ನು ಕಾಣಬೇಕಾದ ರೀತಿ-ಈ ಎಲ್ಲ ವಿಷಯಗಳಲ್ಲಿ ಮಿ. ಸ್ಪೆಕ್ಟೇಟರ್‍ನ ಮಾತೇ ಶಾಸನವಾಯಿತು. 1719ರಲ್ಲಿ ಈತ ತೀರಿಕೊಂಡರೂ ಇನ್ನೂ ಅರ್ಧ ಶತಮಾನ ಈತ ಚಿತ್ರಿಸಿದ ಸಭ್ಯನಡತೆಯೇ ಆದರ್ಶವಾಗಿ ಉಳಿಯಿತು. ಆಸ್ಥಾನದ ಮತ್ತು ನಗರದ ಸಾಮಾಜಿಕ ಜೀವನ ನೈತಿಕವಾಗಿ ಹೀನಸ್ಥಿತಿಗಿಳಿದಿದ್ದಾಗ ಇವನ ಮತ್ತು ಸ್ಟೀಲ್‍ನ ಪ್ರಬಂಧಗಳು ಇದನ್ನು ಸ್ವಚ್ಛಗೊಳಿಸಿ ಉದಾತ್ತಗೊಳಿಸಿದುವು. 
	
ಅಡಿಸನ್ನನು ರೋಸಮಂಡ್ (1707) ಎಂಬ ಗೀತರೂಪಕವನ್ನೂ ಕೇಟೋ (1713) ಎಂಬ ಗಂಭೀರ ನಾಟಕವನ್ನೂ ದಿ ಡ್ರಮ್ಮರ್ (1716) ಎಂಬ ಹರ್ಷನಾಟಕವನ್ನೂ ಬರೆದಿದ್ದಾನೆ. ಕೃತಿ ಹೊರಬಿದ್ದ ವರ್ಷದಲ್ಲಿಯೇ ಅಭಿನಯಿಸಲ್ಪಟ್ಟ. ಇವನ ದುರಂತ ನಾಟಕ ಕೇಟೋ ಬಹು ಯಶಸ್ವಿಯಾಯಿತು. ಕ್ರಿ.ಪೂ. 46 ರಲ್ಲಿ ಜೂಲಿಯಸ್ ಸೀಸರನಿಗೂ ಮಾರ್ಕಸ್ ಪಾರ್‍ಸಿಅಸ್ ಕೇಟೋವಿಗೂ ನಡೆದ ಘರ್ಷಣೆ ನಾಟಕದ ವಸ್ತು. ತಾನು ನಂಬಿದವರು ದ್ರೋಹವೆಸಗಿದ ಮೇಲೆ, ಕೇಟೋ ಶತ್ರುವಿನ ವಶವಾಗಲು ಇಚ್ಛಿಸದೆ, ಗೆಳೆಯರು ತಪ್ಪಿಸಿಕೊಳ್ಳುವಂತೆ ಸಹಾಯಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ದುರಂತಕಥೆಯೊಂದಿಗೆ ಅಡಿಸನ್ ಎರಡು ಪ್ರೇಮದ ಕಥೆಗಳನ್ನು ಹೆಣೆದಿದ್ದಾನೆ. ನಾಟಕ ಪಡೆದ ಯಶಸ್ಸಿಗೆ ಕರ್ತೃವಿನ ಕೀರ್ತಿ ಒಂದು ಕಾರಣ. ಇಂಗ್ಲೆಂಡಿನ ರಾಣಿ ಆ್ಯನ್‍ಳ ಆರೋಗ್ಯಸ್ಥಿತಿ ಕೆಡುತ್ತಿದ್ದುದರಿಂದ ಉತ್ತರಾಧಿಕಾರಿಯ ಪ್ರಶ್ನೆಗೆ ಬಂದಿದ್ದ ಮಹತ್ವ ಮತ್ತೊಂದು ಕಾರಣ. ಪ್ರ್ರಾಚೀನ ನಾಟಕ ಪದ್ಧತಿಯನ್ನು ಅನುಸರಿಸಿದ ಅಡಿಸನ್ ಐಕ್ಯಗಳನ್ನು ಬೆಳೆಸಿದ ರೀತಿ ಅಲ್ಲಲ್ಲಿ ಅಸಮರ್ಪಕವಾಗಿದೆ ; ಕೆಲವು ಘಟನೆಗಳು ಅಸಂಭವ ಎಂದು ತೋರುತ್ತದೆ. ಶೈಲಿಯೂ ಕೃತಕ.								     (ಎಲ್.ಎಸ್.ಎಸ್.)
	
ಅಡಿಸನ್ ತನ್ನ ವಿದ್ಯಾರ್ಥಿ ದೆಶೆಯಲ್ಲೆ ಪ್ರಾಚೀನ ಕಾವ್ಯಗಳನ್ನು ಅಭ್ಯಾಸಮಾಡಿದ್ದು, ಲ್ಯಾಟಿನ್ನಿನಲ್ಲಿ ಕವನಗಳನ್ನು ರಚಿಸಿದ. ಬ್ಲೇನ್‍ಹೀಮ್ ಕಾಳಗದ ವಿಜಯವನ್ನು ಶ್ಲಾಘಿಸಿ ದಿ ಕ್ಯಾಂಪೇನ್ (1704) ಎಂಬ ಕವನವನ್ನು ಲಾರ್ಡ್ ಹ್ಯಾಲಿಫ್ಯಾಕ್ಸರ ಆದೇಶದಂತೆ ರಚಿಸಿದ. ಇದು ಒಂದು ವಿಶಿಷ್ಟ ಘಟನೆಯನ್ನು ಕುರಿತ ಕವನ. ರಚಿತವಾದಾಗ ಜನಪ್ರಿಯವಾಗಿದ್ದು ಈಗ ಮರೆತುಹೋದ ಕೃತಿ. ಆದರೆ ಆಗ ಇದರ ಯಶಸ್ಸು ಅಡಿಸನ್ನನಿಗೆ ರಾಜ್ಯದ ಉಪಕಾರ್ಯದರ್ಶಿತ್ವವನ್ನು ತಂದುಕೊಟ್ಟಿತ್ತು. 		     (ಎನ್.ಎಸ್.ಎಲ್.)
	
ಸಾಮಾನ್ಯ ವಾಚಕರಲ್ಲಿ ಸಾಹಿತ್ಯಾಭಿರುಚಿ ಹುಟ್ಟುವುದಕ್ಕೂ ಬೆಳೆಯುವುದಕ್ಕೂ ಅಡಿಸನ್ ಮಾಡಿದ ಪ್ರಯತ್ನ ಅವನಿಗೆ ಇಂಗ್ಲಿಷ್ ವಿಮರ್ಶೆಯ ಚರಿತ್ರೆಯಲ್ಲಿ ಒಂದು ಸ್ಥಾನವನ್ನು ತಂದುಕೊಟ್ಟಿದೆ. ವಿಮರ್ಶೆಯ ವಿಚಾರದಲ್ಲಿ ಅವನಿಗಿದ್ದ ಅಭಿಪ್ರಾಯವೂ ಅವನ ವಿಮರ್ಶನ ವಿಧಾನವೂ ಅವನು ದಿನವಹಿ ಪ್ರಕಟಿಸುತ್ತಿದ್ದ ಸ್ಪೆಕ್ಟೇಟರ್ ಪ್ರಬಂಧಗಳಲ್ಲಿ ಪ್ರಕಾಶಗೊಂಡವು. ಅದಕ್ಕೆ ಮೊದಲು 1693 ರಲ್ಲಿ ಅಕೌಂಟ್ ಆಫ್ ದಿ ಗ್ರಠಟ್ ಇಂಗ್ಲಿಷ್ ಪೊಯಟ್ಸ್ ಎಂಬ ಲೇಖನವನ್ನು ಅವನು ಬರೆದಿದ್ದರೂ ಅದನ್ನು ಮುಖ್ಯ ಪ್ರಬಂಧವೆನ್ನಲಾಗದು. ಏಕೆಂದರೆ, ಅದರಲ್ಲಿ ಹಿಂದಿನ ಕವಿಗಳಲ್ಲಿ ಚಾಸರ್ ಮತ್ತು ಸ್ಪೆನ್ಸ್, ಅಂದಿನವರಲ್ಲಿ ಕೌಲಿ-ಇವರಿಗೆ ಮಾತ್ರವಲ್ಲದೆ ಮತ್ತಾವ ಹಿರಿಯ ಕವಿಗೂ ಪ್ರಾಶಸ್ತ್ಯ ಬಂದಿಲ್ಲ. 
	
ತುಂಬ ಜನಪ್ರಿಯವಾದ ಸ್ಪೆಕ್ಟೇಟರ್ ಪ್ರಬಂಧಗಳಲ್ಲಿ ಅಡಿಸನ್ನನ ವಿಮರ್ಶನ ಸಾಮಥ್ರ್ಯ ಎದ್ದು ತೋರುತ್ತದೆ. ಈತ ಇಂಗ್ಲಿಷ್ ಕವಿ ಮಿಲ್ಟನ್ನನ ಪ್ಯಾರಡೈಸ್‍ಲಾಸ್ಟ್ ಮಹಾಕಾವ್ಯವನ್ನು ಕುರಿತು ವಿಮರ್ಶಾತ್ಮಕ ಪ್ರಬಂಧಗಳನ್ನು ಬರೆದಿದ್ದಾನಲ್ಲದೆ ಅರಿಸ್ಟಾಟಲನ ಕಾವ್ಯಮೀಮಾಂಸಾ ಸೂತ್ರಗಳನ್ನು ಮಿಲ್ಟನ್ನನಿಗೆ ಅನ್ವಯಿಸಿ, ಅವನು ಹೋಮರ್ ಮತ್ತು ವರ್ಜಿಲ್ ರಂಥ ಭವ್ಯ ಕವಿಗಳಿಗೆ ಸರಿತೂಗತಕ್ಕವನು ಎಂದು ತೀರ್ಮಾನಿಸಿದ್ದಾನೆ. ಅಡಿಸನ್ನನ ಪ್ರಬಂಧಗಳು ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೆ ತರ್ಜುಮೆಯಾದುವು; ಅಲ್ಲದೆ ಅವು ಹಲವು ತಲೆಮಾರುಗಳವರೆಗೆ ಉಳಿದು ನಿಂತು ವಿಮರ್ಶೆಯ ತತ್ತ್ವ ಮತ್ತು ರೀತಿಗಳನ್ನು ಮುಂದಿನವರ ಅರಿಮೆಗೆ ತಂದುವು. 
	
ಅಡಿಸನ್ ಬರೆದ ದಿ ಪ್ಲೆಷರ್ಸ್ ಆಫ್ ದಿ ಇಮ್ಯಾಜಿನೇಷನ್ ಎಂಬ ಲೇಖನಮಾಲೆ ಓದುವುದಕ್ಕೆ ಸ್ವಾರಸ್ಯವಾಗಿದೆ. 
	
ಅವನ ಸುಲಭವೂ ತಿಳಿಯೂ ಗಂಭೀರವೂ ಆದ ಲೇಖನಶೈಲಿ ಇಂಗ್ಲಿಷ್ ಸಾಹಿತ್ಯದಲ್ಲಿ ವೈಶಿಷ್ಟ್ಯವನ್ನು ಹೊಂದಿದೆ. 
(ಎಸ್.ಆರ್.ಎಸ್.)
	
ರಿಚರ್ಡ್ ಸ್ಟೀಲ್‍ನೊಂದಿಗೆ ಸಂಪಾದಿಸುತ್ತಿದ್ದ ಸ್ಪೆಕ್ಟೇಟರ್ ಪತ್ರಿಕೆಯ ಲೇಖನಗಳಲ್ಲಿ ಅಡಿಸನ್ನನ ಸೌಂದರ್ಯಮೀಮಾಂಸೆ ವ್ಯಕ್ತಗೊಂಡಿದೆ. 
	
ವಿಭಾವನೆ ನೀಡುವ ಸಂತೋಷವನ್ನು ಎರಡು ರೀತಿಯಾಗಿ ಕಾಣಬಹುದು-ಮುಖ್ಯ ಮತ್ತು ಗೌಣ ಅಥವಾ ವಾಸ್ತವಿಕ ಮತ್ತು ಮಾನಸಿಕ. ಕಣ್ಣಿಗೆ ಕಾಣುವ ವಸ್ತುಗಳಿಂದ ಪ್ರಚೋದಿತವಾದ ಸಂತಸ ಮೊದಲನೆಯದು. ವಸ್ತುಗಳ ನೆನಪು ಮಾತ್ರದಿಂದ ಹುಟ್ಟುವ ಸಂತಸ ಮತ್ತೊಂದು. ಸೃಷ್ಟಿಯಲ್ಲಿ ಮಹತ್ತರವಾದ, ನೂತನವಾದ ಮತ್ತು ಚೇತನಯುಕ್ತ ಅಥವಾ ಜೀವಯುಕ್ತವಾದ ಘಟನೆಗಳಿವೆ. ವಿಸ್ತಾರವಾದ ಮರುಭೂಮಿ, ದಿಗಂತವ್ಯಾಪಕ ಸಮುದ್ರ. ಉನ್ನತ ಪರ್ವತಶ್ರೇಣಿ ಮತ್ತು ಶಿಖರಗಳು. ಇವು ಮಹಾನ್ ಅಥವಾ ಮಹತ್ತರ ಎನ್ನಬಹುದಾದ ದೃಶ್ಯಗಳು. ಸೃಷ್ಟಿಯಲ್ಲಿ ಸಾಮಾನ್ಯವಾಗಿ ನಮಗೆ ಕಾಣಸಿಗದ, ಆಕಸ್ಮಿಕವಾಗಿಯೇ ಲಭ್ಯವಾಗುವ ಹಲವು ಘಟನೆಗಳನ್ನು ನೂತನ ಎನ್ನಬಹುದು. 
	
ನಾವು ಕಲಾಕೃತಿಗಳೆಂದು ಸಾಮಾನ್ಯವಾಗಿ ಹೇಳುವ ಚಿತ್ರ, ಶಿಲ್ಪ, ಸಂಗೀತ ಮುಂತಾದುವು ನಿಸರ್ಗವನ್ನು ನೆನಪಿಗೆ ತಂದುಕೊಡುವ ಸಾಧನಗಳು. ಪ್ರಕೃತಿಯ ಸಾದೃಶ್ಯವನ್ನು ಅಥವಾ ಪ್ರಕೃತಿಯೊಂದಿಗೆ ಇರಬಹುದಾದ ಸಂಬಂಧವನ್ನು ತೋರಿಸುವ ಭಾವನೆಗಳನ್ನು ಪ್ರೇರೇಪಿಸುವುದರ ಮೂಲಕ ಈ ಕಲಾಕೃತಿಗಳು ನಮಗೆ ಸಂತೋಷವನ್ನು ತಂದುಕೊಡುತ್ತವೆ. ಇಲ್ಲಿಯ ಆನಂದದ ತಳಹದಿ ಮನಸ್ಸಿನ ಭಾವನೆ. ಈ ಕಾರಣದಿಂದಲೇ ರೌದ್ರ, ಭಯಾನಕ ಮತ್ತು ಕರುಣರಸ ಪ್ರಚೋದಕ ಕಲೆಗಳಿಂದ ನಮ್ಮ ನಿಜಸ್ಥಿತಿಯ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎಂದರೆ ಗಂಭೀರ ನಾಟಕ ನಮಗೆ ಆನಂದ ನೀಡುವುದು ಈ ರೀತಿಯಲ್ಲಿ. ಅಲ್ಲಿನ ಅನುಭವ ಕಾಲ್ಪನಿಕ, ಭಾವನಾಯುಕ್ತ ; ಆದರೂ ಸಹಜವಲ್ಲ, ನಿಜವಲ್ಲ. 
	
ನೈಸರ್ಗಿಕ ಅಥವಾ ದೃಶ್ಯಪ್ರಚೋದಿತ ಹರ್ಷವನ್ನು ಮೂಲಭೂತವೆಂದು ಅಡಿಸನ್ನನು ಕರೆದಿದ್ದರೂ ಮಾನಸಿಕ ಅಥವಾ ವಿಭಾವನಾಪ್ರಚೋದಿತ ಆನಂದವನ್ನು ಉತ್ತಮವೆಂದು ಪರಿಗಣಿಸುತ್ತಾನೆ. ಇದಕ್ಕೆ ಕಾರಣ ಆ ಕಾಲದಲ್ಲಿ ಹರಡಿದ್ದ ತತ್ತ್ವದ ಪ್ರಭಾವ, ಅರ್ಥಾತ್ ಜಾನ್‍ಲಾಕ್ ಬರೆದಿದ್ದ ಎಸ್ಸೆ ಆನ್ ಹ್ಯೂಮನ್ ಅಂಡರ್-ಸ್ಟ್ಯಾಂಡಿಂಗ್ ಎಂಬ ಗ್ರಂಥದ ಸಾರಾಭಿಪ್ರಾಯ. ಒಂದೆಡೆ ಅಡಿಸನ್ ಈ ರೀತಿ ಬರೆಯುತ್ತಾನೆ : ವಸ್ತುಗಳಲ್ಲಿ ನಾವು ಕಾಣುವ ಬೆಳಕು, ಬಣ್ಣ, ವಸ್ತುಗಳಲ್ಲಿಲ್ಲ; ಅವು ಕೇವಲ ಮನಸ್ಸಿನ ಭಾವನೆಗಳು. ವಸ್ತುಗಳಿಂದ ಪ್ರತ್ಯೇಕವಾದ ಭಾವನೆಗಳನ್ನು ಮನಸ್ಸು ಸೃಷ್ಟಿಸುವುದರಿಂದಲೇ ನಾವು ಅಲೌಕಿಕ ಆನಂದವನ್ನು ಅನುಭವಿಸಲು ಸಾಧ್ಯ. ಸೌಂದರ್ಯಮೌಲ್ಯ ಕೇವಲ ನಿಸರ್ಗ ಅಥವಾ ಪ್ರಕೃತಿನಿಷ್ಠವಲ್ಲ.
	
ಆನಂದದ ಅಂತಿಮ ಕಾರಣವನ್ನು ನಿಶ್ಚಯಿಸುವುದು ಅಸಾಧ್ಯ. ಆನಂದ ಅಥವಾ ಸುಖವನ್ನು ನೀಡುವ ಕೇವಲ ಬಾಹ್ಯಕಾರಣಗಳನ್ನು ಮಾತ್ರ ನಾವು ಗ್ರಹಿಸಿ ಗಣಿಸಬಹುದು. ಅಂತಿಮವಾದ ಸತ್ಯ ಅಥವಾ ಕಾರಣವೊಂದಿದೆ. ನಾವು ಊಹಿಸಬಹುದಾದರೆ ಅದು ನಮ್ಮನ್ನು ಸೃಷ್ಟಿಸಿದ ದೇವರೇ ಎನ್ನಬೇಕು. ನಾವು ಕಾಣುವ, ಅನುಭವಿಸುವ ಎಲ್ಲ ವಸ್ತುಗಳಲ್ಲೂ ಆತನನ್ನೇ ಕಾಣಬೇಕೆನ್ನುವ ಅನುಭವಿಸಬೇಕೆನ್ನುವ ನಿಯಮದಿಂದಲೇ ನಮ್ಮ ಆತ್ಮವನ್ನು ಸೃಷ್ಟಿಕರ್ತ ರಚಿಸಿದ್ದಾನೆಂದು ಕಾಣುತ್ತದೆ; ಅಥವಾ ನಿರುತ್ಸಾಹದಿಂದ ಔದಾಸೀನ್ಯದಿಂದ ಸೃಷ್ಟಿಯನ್ನು ನಾವು ನೋಡಲೇಬಾರದೆಂಬ ನಿಯಮದಿಂದ ನಮ್ಮನ್ನು ದೇವರು ಸೃಷ್ಟಿಮಾಡಿರುವನೆಂದು ಕಾಣುತ್ತದೆ. 
	
ಅಡಿಸನ್ನನ ಲೇಖನಗಳಲ್ಲಿ ಮೂರು ಹಂತಗಳು ನಮಗೆ ಕಾಣುತ್ತವೆ. ಮೊದಲನೆಯದು ದೃಶ್ಯವಸ್ತುಗಳಿಂದ, ಎರಡನೆಯದು ಮಾನಸಿಕ ಭಾವನೆಗಳಿಂದ, ಮೂರನೆಯದು ದೈಹಿಕ ಕಾರಣದಿಂದ ಉಂಟಾಗುವ ಆನಂದಾನುಭವ. ಜಗತ್ತಿನಿಂದ ಜಗತ್ಕರ್ತೃವಿನೆಡೆಗೆ ಕೊಂಡೊಯ್ಯುವ, ಎಲ್ಲವನ್ನೂ ಆ ದೃಷ್ಟಿಯಿಂದಲೇ ನೋಡಬೇಕೆನ್ನುವ ವಾದ ಇಲ್ಲಿ ಕಂಡುಬರುತ್ತದೆ. 		   
(ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ